ಬ್ಯಾನರ್ಜಿ, ಸುರೇಂದ್ರನಾಥ
	1848-1925. ದೇಶಪ್ರೇಮಿ, ಸ್ವಾತಂತ್ರ್ಯ ಹೋರಾಟಗಾರ, ಶಿಕ್ಷಣತಜ್ಞ ಮತ್ತು ಪತ್ರಿಕೋದ್ಯಮಿ. ಕಲ್ಕತ್ತದ ಶ್ರೀಮಂತ ಕುಟುಂಬದಲ್ಲಿ 1848 ನವೆಂಬರ್ 10ರಂದು ಜನನ. ತಂದೆ ದುರ್ಗಾಚರಣ್ ಬ್ಯಾನರ್ಜಿ, ವೈದ್ಯ. ಮೊದಲು ಬಂಗಾಳಿ ಶಾಲೆಯಲ್ಲಿ ಕಲಿತ ಸುರೇಂದ್ರನಾಥರು ಅನಂತರ ಪೇರೆಂಟಲ್ ಅಕಾಡೆಮಿಕ್ ಸಂಸ್ಥೆ ಮತ್ತು ಡೋವ್‍ಟನ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮುಂದುವರಿಸಿ 1868ರಲ್ಲಿ ಪದವೀಧರರಾದರು. ತಂದೆಯ ಆಕಾಂಕ್ಷೆಯಂತೆ ಇಂಡಿಯನ್ ಸಿವಿಲ್ ಸರ್ವೀಸ್ ಪರೀಕ್ಷೆಗಾಗಿ 1868 ಮಾರ್ಚ್ 3ರಂದು ಇಂಗ್ಲೆಂಡಿಗೆ ತೆರಳಿದರು. 1869ರಲ್ಲಿ ಐಸಿಎಸ್ ಅರ್ಹತಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ 1871ರಲ್ಲಿ ಅಂತಿಮ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದರು.

	ಅದೇ ವರ್ಷ ಭಾರತಕ್ಕೆ ಮರಳಿದ ಬ್ಯಾನರ್ಜಿಯವರನ್ನು ಇಂದಿನ ಅಸ್ಸಾಮ್ ರಾಜ್ಯಕ್ಕೆ ಸೇರಿರುವ ಸಿಲ್ಹೆಟ್‍ನಲ್ಲಿ ಸಹಾಯಕ ನ್ಯಾಯಾಧೀಶರನ್ನಾಗಿ ನೇಮಕಮಾಡಲಾಯಿತು, (22-11-1871). ಭಾರತೀಯರ ಬಗೆಗೆ ಸದಭಿಪ್ರಾಯವಿಲ್ಲದ ಬ್ರಿಟನ್ನಿನವನೇ ಆದ ಜಿಲ್ಲಾ ನ್ಯಾಯಾಧೀಶ ಸುರೇಂದ್ರನಾಥರು ಆ ಹುದ್ದೆಯಲ್ಲಿರುವುದನ್ನು ಸಹಿಸಲಿಲ್ಲ. ಸಣ್ಣ ಕಾರಣವನ್ನೇ ದೊಡ್ಡದು ಮಾಡಿ ಬ್ರಿಟಿಷ್ ಸರ್ಕಾರ 1874 ಮಾರ್ಚ್‍ನಲ್ಲಿ ಇವರನ್ನು ಸೇವೆಯಿಂದ ವಜಾ ಮಾಡಿತು. ಆಗ ಪಂಡಿತ ಈಶ್ವರಚಂದ್ರ ವಿದ್ಯಾಸಾಗರರು ಮೆಟ್ರೊಪಾಲಿಟಿನ್ ಸಂಸ್ಥೆಯಲ್ಲಿ ತಿಂಗಳಿಗೆ ರೂ. 200 ಸಂಬಳವಿತ್ತು ಇಂಗ್ಲಿಷ್ ಪ್ರಾಧ್ಯಾಪಕ ಹುದ್ದೆಯನ್ನು ಇವರಿಗೆ ನೀಡಿದರು (1876).

	ಬ್ರಿಟಿಷ್ ಆಡಳಿತಗಾರರು ಭಾರತೀಯರಿಗೆ ಮಾಡುತ್ತಿದ್ದ ಅನ್ಯಾಯವನ್ನು ಸ್ವಾನುಭವದಿಂದಲೇ ಕಂಡ ಬ್ಯಾನರ್ಜಿಯವರು ಮಧ್ಯಮವರ್ಗದ ವಿದ್ಯಾವಂತರಿಗೆ ಉತ್ತೇಜನ ನೀಡಲು ಹಾಗೂ ಐಕಮತ್ಯದ ಚೈತನ್ಯ ತುಂಬಲು 1876 ಜುಲೈ 26ರಂದು ಇಂಡಿಯನ್ ಅಸೊಸಿಯೇಷನ್ ಸ್ಥಾಪಿಸಿದರು. ಮುಂದೆ ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಈ ಸಂಸ್ಥೆ ಸಲ್ಲಿಸಿದ ಸೇವೆ ಬಲು ಸ್ಮರಣೀಯ. 1880ರಿಂದ ಬ್ಯಾನರ್ಜಿಯವರು ಫ್ರೀಚರ್ಚ್ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ಮುಂದೆ ಸ್ವಾತಂತ್ರ್ಯ ಹೋರಾಟದ ಚಟುವಟಿಕೆಗಾಗಿ ಆ ಹುದ್ದೆಗೆ 1885ರಲ್ಲಿ ರಾಜೀನಾಮೆ ನೀಡಿದರು. 1882ರಲ್ಲಿ ಕಲ್ಕತ್ತ ನ್ಯಾಯಾಲಯದ ಗೌರವ ಪ್ರೆಸಿಡೆನ್ಸಿ ನ್ಯಾಯಾಧೀಶರಾಗಿ ಇವರನ್ನು ನೇಮಿಸಲಾಯಿತು. ಆಗಲೇ ಪ್ರೆಸಿಡೆನ್ಸಿ ವಿದ್ಯಾಸಂಸ್ಥೆಯನ್ನು ವಹಿಸಿಕೊಂಡು ಲಾರ್ಡ್ ರಿಪನ್‍ರವರ ಹೆಸರಿನಲ್ಲಿ ರಿಪನ್ ಕಾಲೇಜ್ ಸ್ಥಾಪಿಸಿದರು. 1875ರಿಂದ 1912ರ ತನಕ ಶಿಕ್ಷಣ ಕ್ಷೇತ್ರದಲ್ಲಿ ದುಡಿದರು.

	ಪತ್ರಿಕೋದ್ಯಮದಲ್ಲಿ ಬ್ಯಾನರ್ಜಿಯವರು ಲಾಹೋರಿನಲ್ಲಿ ಟ್ರಿಬ್ಯೂನ್ ಪತ್ರಿಕೆ ಸ್ಥಾಪಿಸಲು ಶ್ರೀ ದಯಾಲ್ ಸಿಂಗ್ ಮಜೀಥೀಯವರಿಗೆ 1881ರಲ್ಲಿ ಮುದ್ರಣ ಯಂತ್ರ ಕೊಂಡು ಕೊಟ್ಟು ಸಹಾಯ ಮಾಡಿದರು. ಸುರೇಂದ್ರನಾಥರು 1879ರಲ್ಲಿ ಬಂಗಾಲ ಭಾಷಾ ಪತ್ರಿಕೆ ಬೆಂಗಾಲಿಯನ್ನು ವಹಿಸಿಕೊಂಡು ವ್ಯವಸ್ಥಾಪಕರಾಗಿ ಹಾಗೂ ಸಂಪಾದಕರಾಗಿ ಪತ್ರಿಕೆಯನ್ನು ಜನಾಭಿಪ್ರಾಯ ರೂಢಿಸಲು ಬಳಸಿಕೊಂಡರು. ವಿಚಾರಣೆಗಾಗಿ ಹಿಂದೂ ದೇವರ ವಿಗ್ರಹಗಳನ್ನು ನ್ಯಾಯಾಲಯಕ್ಕೆ ತರಬೇಕೆಂದು ಆಜ್ಞಾಪಿಸಿದ ಕಲ್ಕತ್ತದ ಮುಖ್ಯ ಬ್ರಿಟಿಷ್ ನ್ಯಾಯಾಧೀಶರನ್ನು ಧಿಕ್ಕರಿಸಿದರು. ಬಂಗಾಲೀ ಪತ್ರಿಕೆಯ ವಿರುದ್ಧ ಮೊಕದ್ದಮೆ ಹೂಡಿ ನ್ಯಾಯಾಲಯ ನಿಂದನೆಗಾಗಿ 1883 ಮೇ 5ರಂದು ಬ್ಯಾನರ್ಜಿಯವರಿಗೆ ಕಾರಾಗೃಹ ಶಿಕ್ಷೆ ವಿಧಿಸಲಾಯಿತು. ಕಲ್ಕತ್ತ ಪುರಸಭೆಯ ಸದಸ್ಯರಾಗಿದ್ದ (1876-99 ಬ್ಯಾನರ್ಜಿ ಲಾರ್ಡ್ ಕರ್ಜನ್ನರ ನೀತಿಯ ಬಗ್ಗೆ ಪ್ರತಿಭಟಿಸಿ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದರು. ಸಮಾಜ ಸುಧಾರಣೆಗಾಗಿ ತಮ್ಮ ಜೀವನಪರ್ಯಂತ ದುಡಿದು ಇವರು ಮದ್ಯಪಾನದ ವಿರುದ್ಧ ಮತ್ತು ವಿಧವಾ ಪುನರ್ವಿವಾಹದ ಪರ ಅನೇಕ ಚಳವಳಿಗಳನ್ನು ನಡೆಸಿದರು.

	ಸುರೇಂದ್ರನಾಥರು ಭಾರತದ ರಾಜಕೀಯ ಕಾಂಗ್ರೆಸ್ ಸಂಸ್ಥಾಪಕರಲ್ಲಿ ಒಬ್ಬರು. ಭಾರತದ ರಾಜಕೀಯ ಸುಧಾರಣೆಗಳ ಜಾರಿಗಾಗಿ ಆಗಿನ ಬ್ರಿಟಿಷ್ ಸರ್ಕಾರದ ಹಾಗೂ ಪ್ರಜೆಗಳ ಗಮನ ಸೆಳೆಯಲು ಮುಂಬಯಿಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನ ಸುರೇಂದ್ರನಾಥರನ್ನು ಮತ್ತು ಇತರ ಪ್ರಮುಖರ ತಂಡವನ್ನು 1890ರಲ್ಲಿ ಲಂಡನ್ನಿಗೆ ಕಳುಹಿಸಿಕೊಡಲಾಯಿತು.

	1893ರಲ್ಲಿ ಬಂಗಾಲದ ವಿಧಾನಪರಿಷತ್ತಿಗೆ ಅವಿರೋಧವಾಗಿ ಆಯ್ಕೆಯಾದ ಬ್ಯಾನರ್ಜಿಯವರು 1901ರ ತನಕ ಸತತವಾಗಿ ಪರಿಷತ್ತಿಗೆ ಆರಿಸಿಬಂದ ಪ್ರಥಮ ಹಾಗೂ ಏಕೈಕ ಬಂಗಾಳ ನೇತಾರರು. 1895ರಲ್ಲಿ ಇವರನ್ನು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಆರಿಸಲಾಯಿತು. 1897ರಲ್ಲಿ ವೆಲ್ ಆಯೋಗದ ಮುಂದೆ ಭಾರತದ ಆರ್ಥಿಕ ವೆಚ್ಚ ಹಾಗೂ ಉನ್ನತ ಹುದ್ದೆಗಳಿಗೆ ಭಾರತೀಯರ ನೇಮಕಾತಿ ವಿಷಯವಾಗಿ ಸಾಕ್ಷಿ ಹೇಳಲು ಇವರನ್ನು ಇಂಗ್ಲೆಂಡಿಗೆ ಕಳುಹಿಸಲಾಯಿತು. 1902ರಲ್ಲಿ ಎರಡನೆಯ ಬಾರಿಗೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‍ನ ಅಧ್ಯಕ್ಷರಾದರು. 1909ರಲ್ಲಿ ಲಂಡನ್ನಿನಲ್ಲಿ ನಡೆದ ಇಂಪೀರಿಯಲ್ ಪತ್ರಿಕಾ ಸಮ್ಮೇಳನದಲ್ಲಿ ಸುರೇಂದ್ರನಾಥರು ಭಾರತದ ಏಕೈಕ ಪ್ರತಿನಿಧಿಯಾಗಿ ಭಾಗವರ್ತಿಸಿದ್ದರು. ಬಂಗಾಲೀ ವಾರಪತ್ರಿಕೆಯನ್ನು 1900ರಲ್ಲಿ ದಿನಪತ್ರಿಕೆಯಾಗಿ ಪರಿವರ್ತಿಸಲಾಯಿತು. ಬಂಗಾಲೀ ಇಂಗ್ಲೆಂಡಿನ ರಾಯಿಟರ್ ಸುದ್ಧಿ ಸಂಸ್ಥೆಯ ಚಂದಾದಾರರಲ್ಲಿ ಪ್ರಥಮ ಭಾರತೀಯ ಭಾಷಾಪತ್ರಿಕೆ. ಬಂಗಾಲ ವಿಭಜನೆಯ ವಿರುದ್ಧ ಬ್ಯಾನರ್ಜಿಯವರು ತಮ್ಮ ಪತ್ರಿಕೆಯ ಮೂಲಕ ಆಂದೋಲನ ನಡೆಸಿದರು. ಭಾರತೀಯ ಭಾಷಾ ಪತ್ರಿಕೋದ್ಯಮದಲ್ಲಿ ಬಂಗಾಲೀ ಪತ್ರಿಕೆಗೆ ಚಿರಸ್ಥಾಯಿ ಸ್ಥಾನ. ಪತ್ರಿಕೆಯ ಆಡಳಿತ ನೋಡಿಕೊಳ್ಳಲು 1919ರಲ್ಲಿ ಒಂದು ಸಂಸ್ಥೆ ಸ್ಥಾಪಿಸಿ ಬ್ಯಾನರ್ಜಿ ನಿವೃತ್ತಿಹೊಂದಿದ್ದರು.

	ವೈಸ್‍ರಾಯ್ ರವರ ವಿಧಾನ ಪರಿಷತ್ತಿಗೆ 1918ರಲ್ಲಿ ಸುರೇಂದ್ರನಾಥರು ಆಯ್ಕೆಯಾದರು. ಐದು ವರ್ಷಗಳ ಕಾಲ ಕಲ್ಕತ್ತ ವಿಶ್ವ ವಿದ್ಯಾನಿಲಯದ ಸೆನೆಟ್ ಸದಸ್ಯರಾಗಿ ವಿದ್ಯಾಕ್ಷೇತ್ರದಲ್ಲಿ ಸುಧಾರಿತ ಕಾನೂನುಗಳನ್ನು ಜಾರಿಗೆ ತರಲು ಕಾರಣರಾದರು.

	1921ರಲ್ಲಿ ಕಲ್ಕತ್ತದ ಬಾರಾಕ್‍ಪುರ್‍ನಿಂದ ಬಂಗಾಳದ ವಿಧಾನ ಪರಿಷತ್ತಿಗೆ ಆಯ್ಕೆಯಾದ ಇವರನ್ನು ಸರ್ಕಾರ ಮಂತ್ರಿಮಂಡಲ ಸೇರುವಂತೆ ಆಹ್ವಾನಿಸಿತು. 1921 ಜನವರಿ 4ರಂದು ಸುರೇಂದ್ರನಾಥರು ಸ್ಥಳೀಯ ಸ್ವಯಂ ಸರ್ಕಾರದ ಮಂತ್ರಿಯಾಗಿ ನೇಮಕಗೊಂಡರು.

	ಬಂಗಾಳ ವಿಭಜನೆಯ ವಿರುದ್ಧ, ಸ್ವಯಂ ಸರ್ಕಾರಕ್ಕಾಗಿ ಹಾಗೂ ಮಾನವ ಹಕ್ಕುಗಳಿಗಾಗಿ ದೃಢವಾಗಿ ಹೋರಾಡಿದ ಸುರೇಂದ್ರನಾಥರು ಬ್ರಿಟಿಷ್ ಸರ್ಕಾರ ನೀಡಿದ ನೈಟ್ ಪದವಿಯನ್ನು ಅಂಗೀಕರಿಸಿದ್ದರು ರಾಷ್ಟ್ರೀಯ ಕಾಂಗ್ರೆಸ್‍ನ ಸುಧಾರಣಾವಾದಿಗಳ ಗುಂಪಿಗೆ ಸೇರಿದ್ದ ಇವರು ಮುಂದೆ ಕಾಂಗ್ರೆಸ್‍ನ ಚಟುವಟಿಕೆಗಳು ತೀವ್ರಗೊಂಡಾಗ ಮತ್ತು ಮಾಂಟೆಗ್ಯೂ ಚೇಮ್ಸ್‍ಫರ್ಡ್ ಸುಧಾರಣೆಯ ಮುನ್ನೆಡೆಯಲ್ಲಿ ಕಾಂಗ್ರೆಸ್ ವಿಭಜನೆಗೊಂಡಾಗ ಹಿಂದೆ ಸರಿದರೂ ಭಾರತ ಸ್ವಾತಂತ್ರ ಹೋರಾಟದಲ್ಲಿ ಇವರು ಸಲ್ಲಿಸಿದ ಸೇವೆ ಅಪಾರವಾದುದೆಂಬುದನ್ನು ಯಾರೂ ಅಲ್ಲಗಳೆಯುವಂತಿಲ್ಲ.

	ಎ ನೇಷನ್ ಇನ್ ಮೇಕಿಂಗ್ ಇವರು 1925ರಲ್ಲಿ ಬರೆದ ಆತ್ಮಚರಿತ್ರೆ. ಇದು ಭಾರತ ಸ್ವಾತಂತ್ರ್ಯ ಸಂಗ್ರಾಮದ ಮೊದಲ ಹಂತವನ್ನು ಸಮಗ್ರವಾಗಿ ಚಿತ್ರಿಸುತ್ತದೆ.
(ಎನ್.ಯು.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ